ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಸ್‌ಎಂಕೆ
(CHIKKAMAGALURU): ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಜಿಲ್ಲೆಯ ನಿಕಟವರ್ತಿಗಳಾಗಿದ್ದರು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗ್ಡೆಯವರು ಜಿಲ್ಲೆಯವರೇ ಆಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು.
ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಲ್ಲಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರವನ್ನು ಎಸ್.ಎಂ.ಕೃಷ್ಣ ಅವರೇ ಉದ್ಘಾಟಿಸಿದ್ದು ಎಲ್ಲವೂ ಹಸುರಾಗಿದೆ. ಸಿದ್ಧಾರ್ಥ್ ಅವರ ಎಸ್ಟೇಟ್‌ಗಳಲ್ಲಿ ಕೆಲವೊಂದು ಬಾರಿ ಇಲ್ಲಿಗೆ ಆಗಮಿಸಿ ತಂಗಿದ್ದು ಸಹ ನಮ್ಮ ನೆನಪಿನಲ್ಲಿ ಇದೆ.
ಅಜಾತ ಶತ್ರು ಆಗಿದ್ದ ಕೃಷ್ಣ ಅವರ ನಿಧನ ಜಿಲ್ಲೆಗೆ, ರಾಜ್ಯದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.