ವಿದ್ಯಾರ್ಥಿಯ ತಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರೊ ಮೇಲೆ ಹಲ್ಲೆ, ಕ್ರಮಕ್ಕೆ ಆಗ್ರಹ.
(SHIVAMOGA): ಸಾಗರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಾಜುರವರಿಗೆ ಅದೇ ಕಾಲೇಜಿನ ವಿದ್ಯಾರ್ಥಿ ವಿ. ನಿಶ್ಚಯ್ ಕುಮಾರ್, ತಂದೆ ಎಸ್.ಎನ್. ವಿಜಯ ಕುಮಾರ್‌ರವರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ವಿಚಾರವಾಗಿ ಸರಕಾರಿ ನೌಕರರ ಸಂಘದ ತಾಲೂಕು ಪದಾಧಿಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪ ವಿಭಾಗಾಧಿಕಾರಿಯವರಿಗೆ ಸೋಮವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಡಿ.21ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಗೆ ತಯಾರಿ ನಡೆಸುತ್ತಿದ್ದಾಗ ವಿದ್ಯಾರ್ಥಿ ನಿಶ್ಚಯ ಕುಮಾರ್ ತಂದೆಯೊಂದಿಗೆ ಬಂದು ಎಲ್ಲರೆದುರು ತಮ್ಮನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ರಾಜು ಅವರು ತಿಳಿಸಿದ್ದಲ್ಲದೆ, ಕ್ರಮ ತೆಗೆದುಕೊಳ್ಳುವಂತೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆದರೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಗಳ ಬಂಧನವಾಗಿಲ್ಲ. ನಿತ್ಯವೂ ಒತ್ತಡದ ನಡುವೆ ಕೆಲಸ ಮಾಡುವ ಸರಕಾರಿ ನೌಕರರಿಗೆ ಜೀವ ಭದ್ರತೆಯಿಲ್ಲದೆ, ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗುತ್ತಿದೆ. ಕೂಡಲೇ ಎಸಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ವೇಳೆ ಪ್ರಮುಖರಾದ ದೇವೇಂದ್ರಪ್ಪ, ಸಹದೇವ್, ಪ್ರೊ. ಚಂದ್ರಶೇಖರ್, ಪ್ರೊ. ಸುರೇಶ್ ಮೊದಲಾದವರು ಮಾತನಾಡಿದರು. ಸರಕಾರಿ ನೌಕರರ ಸಂಘದ ಮಮತಾ ಹೆಗಡೆ, ಸುಮಾ, ವಿದ್ಯಾ, ಶ್ರೀಧರ್, ಪ್ರಕಾಶ್, ಮಹಾವೀರ ಜೈನ್, ಚಂದ್ರಶೇಖರ್, ಮಂಜಪ್ಪ, ನಾಗರಾಜ್, ಗಣಪತಿ, ಸುರೇಶ್, ಉಷಾ, ಸೀಮಾ ಕೌಸರ್ ಮೊದಲಾದವರು ಹಾಜರಿದ್ದರು.
ಪ್ರೊ. ಕೆ.ಆರ್.ರಾಜುರವರ ಮೇಲಿನ ಹಲ್ಲೆ ಖಂಡಿಸಿ ವಿದ್ಯಾರ್ಥಿಗಳು ಸರಕಾರಿ ಕಾಲೇಜು ಎದುರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಆರ್. ಯತೀಶ್‌ರವರಿಗೆ ಮನವಿ ಸಲ್ಲಿಸಿದರು. ಶನಿವಾರ ಬೆಳಗ್ಗೆ ಕಾಲೇಜಿನಲ್ಲಿ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ವಿ. ನಿಶ್ಚಯ ಕುಮಾರ್, ತಂದೆ ಎಸ್.ಎನ್. ವಿಜಯಕುಮಾರ್ ಹಲ್ಲೆ ಮಾಡಿದ್ದಾರೆ. ಜತೆಯಲ್ಲಿ ಇತರ ಪ್ರಾಧ್ಯಾಪಕರ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅಭಿಪ್ರಾಯ ಹರಿಬಿಡುತ್ತಿದ್ದಾರೆ. ಪ್ರೊ. ರಾಜುರವರು ಉತ್ತಮ ಉಪನ್ಯಾಸಕಾರಿಗದ್ದು, ನಿಷ್ಟೆಯಿಂದ ಪಾಠಪ್ರವಚನದಲ್ಲಿ ತೊಡಗಿಕೊಂಡಿದ್ದಾರೆ. ಅಂತಹವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕೂಡಲೆ ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಧುಚಂದ್ರ, ಕೆ.ಎಚ್. ರಕ್ಷಿತ್, ದಿನೇಶ್, ಶೈಲಜ, ಲಕ್ಷ್ಮಿ, ವೈಷ್ಣವಿ, ಅಮಿತಾ, ಶ್ರೇಯಸ್, ಯೋಗೇಶ್, ಡಿ. ಧನ್ಯ, ಪವನ ಕುಮಾರ್, ಗಜೇಂದ್ರ, ರಾಜೇಶ್, ರಮೇಶ, ನಿಖಿಲ್, ಮಧು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.
ಎಸಿಯವರಿಂದ ಕ್ರಮದ ಭರವಸೆ
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಕಾಲೇಜಿನ ಎದುರು ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಆರ್. ಯತೀಶ್, ಪ್ರಾಧ್ಯಾಪಕ ರಾಜುರವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ವರದಿ: ರಾಘವೇಂದ್ರ ತಾಳಗುಪ್ಪ