Newsಕೋಲಾರ

ಬೆಮೆಲ್ ಗುತ್ತಿಗೆ ಕಾರ್ಮಿಕರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸುತ್ತಿಲ್ಲ

ಬೆಮೆಲ್ ಗುತ್ತಿಗೆ ಕಾರ್ಮಿಕರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸುತ್ತಿಲ್ಲ

(KOLARA): ಬಂಗಾರಪೇಟೆ: ಕೇಂದ್ರ ಸರ್ಕಾರಿ ಒಡೆತನದ ದೇಶದ ಹೆಮ್ಮೆಯ ಬೆಮೆಲ್ ಕೆಜಿಎಫ್ ಕಾರ್ಖಾನೆಯಲ್ಲಿ ಪ್ರಸ್ತುತ ಖಾಯಂ ನೌಕರರ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ಗುತ್ತಿಗೆ ನೌಕರರು ಸಹ ಬೆಮೆಲ್‌ನ ಬಹುತೇಕ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಬೆಮೆಲ್ ಕಾರ್ಖಾನೆಯ ವ್ಯವಹಾರ ಮತ್ತು ಲಾಭವು ಹೆಚ್ಚಾಗುತ್ತಿದೆ. ಆದರೆ ಬೆಮೆಲ್ ಗುತ್ತಿಗೆ ಕಾರ್ಮಿಕರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್ ತಹಸೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡುತ್ತಾ, ಅವರು ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಮತ್ತು ಸೌಲಭ್ಯಗಳನ್ನು ನೀಡಿ ಸುಮಾರು ೩೦ ವರ್ಷಗಳಿಂದ ದುಡಿಸಿಕೊಳ್ಳಲಾಗುತ್ತಿದೆ. ನೂರಾರು ಗುತ್ತಿಗೆ ಕಾರ್ಮಿಕರು 30 ವರ್ಷಗಳ ಸೇವೆ ಸಲ್ಲಿಸಿ, ನಿವೃತ್ತಿಯ ಸಂದರ್ಭದಲ್ಲಿ ಯಾವುದೇ ಪರಿಹಾರ ಇಲ್ಲದೇ ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ಸುತ್ತೋಲೆಗಳು ಮತ್ತು ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕು ಸಂಚಾಲಕ ಬಿ.ಎಲ್.ಕೇಶವರಾವ್ ಮಾತನಾಡಿ, ಬೆಮೆಲ್ ಆಡಳಿತ ಮಂಡಳಿಯು ಖಾಯಂ ನೌಕರರ ನೇಮಕಾತಿಯ ಸಂದರ್ಭದಲ್ಲಿ ಸೇವಾ ಹಿರಿತನ ಮತ್ತು ನೈಪುಣ್ಯತೆ ಆಧಾರದ ಮೇಲೆ ಗುತ್ತಿಗೆ ನೌಕರರಿಗೆ ಕಲ್ಪಿಸಿದ್ದ ಅವಕಾಶವನ್ನು ಇತ್ತೀಚೆಗೆ ಕೈಬಿಡಲಾಗಿದೆ. ಈ ಕುರಿತು ಬೆಮೆಲ್ ಕೆಜಿಎಫ್‌ನ ಗುತ್ತಿಗೆ ಕಾರ್ಮಿಕರ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಬೆಮಲ್ ಗುತ್ತಿಗೆ ಕಾರ್ಮಿಕರ ಹಿರಿತನ ಮತ್ತು ನೈಪುಣ್ಯತೆಯನ್ನು ಪರಿಗಣಿಸಿ ಅವಕಾಶ ನೀಡುವಂತೆ ನೀಡಿರುವ ಆದೇಶವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.

ತಾಲ್ಲೂಕು ಮುಖಂಡ ಟಿ.ಅಪ್ಪಯ್ಯಣ್ಣ ಮಾತನಾಡಿ, ಕಳೆದ ಆಗಸ್ಟ್ ತಿಂಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶಬಾಬು, ಕೆಜಿಎಫ್ ಶಾಸಕಿ  ಎಂ.ರೂಪಕಲಾ ಶಶಿಧರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ ಇದು ಪ್ರಯೋಜನವಾಗಲಿಲ್ಲ. ಇದರಿಂದ ಗುತ್ತಿಗೆ ಕಾರ್ಮಿಕರು ನವೆಂಬರ್ 5 ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರೂ ಬೆಮೆಲ್ ಆಡಳಿತ ಮಂಡಳಿಯು ಹಲವಾರು ರೀತಿಯಲ್ಲಿ ಕಿರುಕುಳ ನೀಡಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಖಂಡನೀಯ. ಈ ಕೂಡಲೇ ಬೆಮೆಲ್ ಆಡಳಿತ ಮಂಡಳಿಯು ಹೋರಾಟ ನಿರತ ಗುತ್ತಿಗೆ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಮೋಹನ್, ಸಿಐಟಿಯು ರೈತ ಮುಖಂಡ ಸಿ.ಆರ್.ಮೂರ್ತಿ, ಡಿ.ಕೆ.ಹಳ್ಳಿ ಗ್ರಾ.ಪಂ ಸದಸ್ಯ ಜಿ.ಗಣೇಶನ್, ಎ.ಸಿ.ವೆಲಾಯುದನ್, ರವಿಶೇಖರ್, ಕರುಪಯ್ಯ, ಸೋಮಶೇಖರ್, ವೆಂಕಟೇಶ್, ಪದ್ಮನಾಭಯ್ಯ ಹಾಗೂ ಇನ್ನಿತರರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ 

Leave a Reply

Your email address will not be published. Required fields are marked *

Scan the code