ನಮ್ಮ ಹಿರಿಯರು ಕೊಟ್ಟ ಭೂಮಿ ಹಿಂದಿರುಗಿಸಿ.ಎಂದು ಒತ್ತಾಯಿಸಿ ಲಿಂಗನಮಕ್ಕಿ- ಚಲೋಗೆ ರೈತರ ತೀರ್ಮಾನ.
(SHIVAMOGA): ಸಾಗರ :ಮಲೆನಾಡು ರೈತರ ಭೂಮಿ ಹಕ್ಕಿನ ಬೇಡಿಕೆಗೆ ಸರಕಾರ ನಿರ್ಲಕ್ಷ ವಹಿಸಿದ್ದರಿಂದ ನಮ್ಮ ಎಲ್ಲಾ ಹೋರಾಟ ಗಾರರು ಸಾಗರದಿಂದ ಹಿರಿಯರು ಭೂಮಿ ಕೊಟ್ಟ ಲಿಂಗನಮಕ್ಕಿ ಜಲಾಶಯದ ವರೆಗೆ ಪಾದಯಾತ್ರೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯ ಮೂರನೇ ದಿನವಾದ ಬುಧವಾರ ಮಾತನಾಡಿದ ಅವರು, ಮಲೆನಾಡಿನ ರೈತರು ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದೇವೆ. ಜನರ ಭೂಮಿ ಹಕ್ಕು ಕೇಳುವ ಚಳವಳಿಯನ್ನು ಹಗುರವಾಗಿ ಪರಿಗಣಿಸಿ ಮಾತನಡುತ್ತಿರುವುದು ಖಂಡನಿಯ. ಗೇಣಿ ರೈತರಿಗೆ ಭೂಮಿ ಕೊಡಿಸಿದ ಪುಣ್ಯಾತ್ಮ ಕಾಗೋಡು ತಿಮ್ಮಪ್ಪನವರು ಚಾಲನೆ ನೀಡಿದ ಹೋರಾಟದಲ್ಲಿ ಎಲ್ಲ ಪಕ್ಷದವರೂ ಪಾಲ್ಗೊಂಡಿದ್ದಾರೆ. ಆದರೆ ಶಾಸಕರು, ಉಸ್ತುವಾರಿ ಸಚಿವರು ಈವರೆಗೂ ಬಂದಿಲ್ಲ. ಅವರು ಇಲ್ಲಿಗೆ ಬಂದು ಸರಕಾರದ ನಿಲುವು ಸ್ಪಷ್ಟಪಡಿಸಬೇಕು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಸಮರ್ಪಕ ಮಾಹಿತಿ ಇಲ್ಲದೆ ಸ್ಥಳಕ್ಕೆ ಬಂದು ಕಾಟಾಚಾರದ ಮಾತನಾಡಿರುವುದು ಬೇಸರದ ಸಂಗತಿಯಾಗಿದೆ .ಶಾಂತಿಯಿಂದ ನ್ಯಾಯಯುತವಾಗಿ ಹೋರಾಡುತ್ತಿರುವ ರೈತ ಸಂಘವನ್ನು ಅವಮಾನಿಸುವ, ಅಪಪ್ರಚಾರ ಮಾಡುವುದನ್ನು ಸರಕಾರ ನಿಲ್ಲಿಸಬೇಕು. ಜತೆಗೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳ ಬಗ್ಗೆ ತುರ್ತುಸಭೆ ಕರೆದು ಅಗತ್ಯ ಕ್ರಮಕ್ಕೆ ಸೂಚಿಸಬೇಕು ಇಲ್ಲವಾದಲ್ಲಿ ಇನ್ನು ಕಠಿಣ ಪ್ರತಿಭಟನೆ ನಡೆಸುವ ಚಿಂತನೆ ಮಾಡಬೇಕಾಗುತ್ತದೆ. ಪ್ರತಿಭಟನೆಯ ಮುಂದುವರಿದ ಭಾಗವಾಗಿ ನಾಲ್ಕನೇ ದಿನ ಲಿಂಗನಮಕ್ಕಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಸಾಗರದಿಂದ ಹೊರಟು, ತಾಳಗುಪ್ಪ, ಕಾರ್ಗಲ್ ಮಾರ್ಗವಾಗಿ ಮೂರು ದಿನದಲ್ಲಿ ಲಿಂಗನಮಕ್ಕಿ ಅಣೇಕಟ್ಟು ಸ್ಥಳ ತಲುಪುತ್ತೇವೆ. ಅಲ್ಲೀವರೆಗೆ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಅದಕ್ಕೂ ಸ್ಪಂದಿಸದಿದ್ದರೆ ಡ್ಯಾಮ್ ಒಡೆದು ನಾವು ಕೊಟ್ಟ ಭೂಮಿಯನ್ನು ಹಿಂಪಡೆಯುವುದೂ ಅನಿವಾರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ಭೂ ಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ 6 ಜಲಾಶಯ ಯೋಜನೆಗೆ ಸಹಸ್ರಾರು ಜನ ನಿರಾಶ್ರಿತರಾಗಿದ್ದಾರೆ. ಆದರೂ ಸರಕಾರ ಪುನರ್ ವಸತಿ ಕಲ್ಪಿಸುವಲ್ಲಿ ಗಂಭೀರ ಚಿಂತನೆ ನಡೆಸಿಲ್ಲ. ನಮ್ಮ ಹಿರಿಯರ ಸಮಾಧಿ ಮೇಲೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿ ಆರೂವರೆ ದಶಕವಾದರೂ ಹಕ್ಕುಪತ್ರ ಕೊಡದ ಸರಕಾರ, ನಾವು ಕೊಟ್ಟ ಭೂಮಿ ಹಿಂತಿರುಗಿಸಲಿ. ಇದೇ ಹಕ್ಕೊತ್ತಾಯದೊಂದಿಗೆ ಲಿಂಗನಮಕ್ಕಿ ಚಲೋ ಮೆರವಣನಿಗೆ ಹಮ್ಮಿಕೊಂಡಿದ್ದೇವೆ ಎಂದರು.
ಬುಧವಾರ ಸಂಜೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಕಷ್ಟ ವಿಚಾರಿಸಿ, ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಪರವಾಗಿ ಸದಾ ಇರುವ ಆಶ್ವಾಸನೆ ನೀಡಿದರು. ವಕೀಲರ ಸಂಘ ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದವು.
ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಡಾ. ರಾಮಚಂದ್ರಪ್ಪ, ಕುಮಾರಗೌಡ, ರವಿಕುಗ್ವೆ, ಅಣ್ಣಪ್ಪ, ಜೀವೇಶ್ ಕುಮಾರ್, ಶಿವು ಮೈಲಾರಿಕೊಪ್ಪ, ಕನ್ನಪ್ಪ ಬೆಳಲಮಕ್ಕಿ, ರುದ್ರೇಶ್ ಬಾಳಗೋಡು, ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ