ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾ.ಪಂ ವ್ಯಾಪ್ತಿ.
(CHIKKAMAGALURU): ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯ – ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೂಲಭೂತ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಎಂದು ಹುಣಸೆಕೊಪ್ಪ ಗ್ರಾಮಸ್ಥರಾದ ಲೋಕೇಶ್ ತಿಳಿಸಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಈ ರಸ್ತೆ ಡಾಂಬರೀಕರಣವಾಗಿದ್ದು ತದನಂತರದಲ್ಲಿ ಈ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನಹರಿಸಲೆ ಇಲ್ಲ. ಮೇಲ್ಪಾಲ್‌ನಿಂದ ಹುಣಸೆಕೊಪ್ಪ, ಗಡಿಗೇಶ್ವರ, ಕಾನೂರು ಕಟ್ಟಿನಮನೆ, ಕುದರೆಗುಂಡಿ ಮೂಲಕ ಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಜಲ್ಲಿಗಳೆಲ್ಲಾ ಕಿತ್ತು ಬಂದಿದ್ದು ಪಾದಾಚಾರಿಗಳು ಸಹಾ ನಡೆಯದಂತಾಗಿದೆ.
ಗಂಗೋಜಿಯಿಂದ ತುಪ್ಪೂರು ಕೈಮರದಿಂದ ಗಡಿಗೇಶ್ವರಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಅದೇ ರೀತಿ ಕರ್ಕೆಶ್ವರ ಕೈಮರದಿಂದ ಗುಬ್ಬೂರಿಗೆ ಹೋಗುವ ರಸ್ತೆಯು ಡಾಂಬರೀಕರಣ ಕಾಣದೆ ಜಲ್ಲಿಯೆಲ್ಲ ಕಿತ್ತು ಬಂದಿದ್ದು ಈ ದುರ್ಗಮ ಹಾದಿಯಲ್ಲಿ ಬೈಕ್ ಸವಾರರು ಸಂಚರಿಸುವುದೆ ಕಷ್ಟಕರವಾಗಿದೆ ಎಂದು ಗ್ರಾಮಸ್ಥರಾದ ರವಿ ತಿಳಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಣ್ಣು ಹಾಕಿ ತಾತ್ಕಾಲಿಕವಾಗಿ ಸಂಚರಿಸಲು ದುರಸ್ಥಿ ಮಾಡಬಹುದಿತ್ತು ಆದರೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸ್ವಜನಪಕ್ಷಪಾತದ ಕಾಮಗಾರಿ ಮಾಡಿಸುತ್ತಿದ್ದಾರೆಂಬ ಆರೋಪವಿದೆ.
ರಸ್ತೆಯ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಈ ಹಿಂದೆ ಪತ್ರ ಬರೆದು ರಸ್ತೆ ಅಭಿವೃದ್ಧಿ ಮಾಡಿಸುವಂತೆ ಮನವಿ ಮಾಡಲಾಗಿದೆ ಎಂದು ಪಿಡಿಒ ಪ್ರೇಮ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ತಟ್ಟಿಖಾನ್ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ತಡೆಗೋಡೆಯ ರಾಡುಗಳು ಕಿತ್ತುಕೊಂಡು ಹೋಗಿದ್ದು ಅಪಘಾತಗಳು ಸಂಭವಿಸಿದಲ್ಲಿ ಹಳ್ಳಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲಿ ಈ ರಸ್ತೆ ಅಭಿವೃದ್ಧಿ ಕಾಣದೆ ಇದ್ದು ಸಮಸ್ಯೆಯನ್ನು ಬಗೆಹರಿಸುವವರು ಯಾರೆಂದು ಗ್ರಾಮಸ್ಥರಾದ ಅಲ್ಪನ್ಸ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಮಂತ್ರಿಯಾಗಿದ್ದಾಗ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ಈ ರಸ್ತೆಯನ್ನು ಡಾಂಬರೀಕರಣ ಮಾಡಿಕೊಡಲಾಗಿತ್ತು. ಇದೀಗ ನೂತನ ಸಂಸದರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಪತ್ರ ಬರೆದು ರಸ್ತೆ ಅಭಿವೃದ್ಧಿ ಮಾಡಿಕೊಡಬೇಕೆಂದು ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೇಳುತ್ತಿದ್ದು ಚಂದ್ರಗ್ರಹ ಹಾಗೂ ಮಂಗಳ ಗ್ರಹಕ್ಕೆ ಯಾನ ಮಾಡಲು ಮುಂದಾಗಿರುವ ವಿಜ್ಞಾನಿಗಳ ಆವಿಷ್ಕಾರ ಶ್ಲಾಘನೀಯವಾಗಿದೆ. ಆದರೆ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಯನ್ನು ಬಗೆಹರಿಸಲು ವಿಫಲರಾಗಿದ್ದು ಭವಿಷ್ಯದ ದಿನಗಳಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆ ಬರಲಿದ್ದು ಆ ಅವಧಿಯೊಳಗೆ ರಸ್ತೆ ಅಭಿವೃದ್ಧಿಯಾಗಬಹುದೆಂದು ಕಾದು ನೋಡಬೇಕಿದೆ.
ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯ ಹುಣಸೆಕೊಪ್ಪದಿಂದ ಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಅಭಿವೃದ್ಧಿ ಕಾಣದ ರಸ್ತೆಯ ದುಸ್ಥಿತಿ
ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯ ತಟ್ಟಿಖಾನ್ ಹಳ್ಳದ ಸೇತುವೆಯ ದುಸ್ಥಿತಿ.