ಪರಿಸರ ಸಂಘಟನೆಗಳ ಧ್ವನಿಗೆ ಸರ್ಕಾರದ ನಿರ್ಲಕ್ಷ್ಯ ನ್ಯಾಯಾಲಯದ ಮೊರೆಹೋಗುವ, ಅನಿವಾರ್ಯ ಪರಿಸ್ಥಿತಿ.
(SHIVAMOGA): ಸಾಗರ: ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ಭೂಗತ ಬೃಹತ್ ಜಲವಿದ್ಯುತ್ ಯೋಜನೆಯ ತಯಾರಿಯಲ್ಲಿದ್ದು ಪರಿಸರ ಸಂಘಟನೆಗಳು ಹೊನ್ನಾವರ ಮತ್ತು ಸಾಗರಗಳಲ್ಲಿ ಜನರ ಅಹವಾಲು ಸಭೆ ನಡೆಸಲು ಆಗ್ರಹ ಮಾಡುತ್ತಲೇ ಇವೆ. ಅಲ್ಲಿ ಬೆಂಗಳೂರಲ್ಲಿ ರಾಜ್ಯ ಅರಣ್ಯ ಇಲಾಖೆ ಶರಾವತಿ ಕಣಿವೆ ಧ್ವಂಸ ಮಾಡುವ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡಿದೆ. ಇಂತಹ ಪಾರಿಸಾರಿಕ ವಿಕೃತಿ ಕುರಿತು ಪರಿಸರ ತಜ್ಞರು ಸೇರಿದಂತೆ ವನವಾಸಿಗಳು, ರೈತರು ಆತಂಕಕ್ಕೊಳಗಾಗುವಂತೆ ಮಾಡಿದೆ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಕಳವಳ ವ್ಯಕ್ತಪಡಿಸಿದ್ದಾರೆ.
ಶಿರಸಿಯಲ್ಲಿ ನಡೆದ ರಾಜ್ಯ ಪರಿಸರ ಸಮ್ಮೇಳನ, ಮೂಡಬಿದ್ರಿಯ ಕೆರೆ ಸಮ್ಮೇಳನ, ಹೊಸನಗರ, ಸಾಗರದ ಮಲೆನಾಡು ಪರಿಸರ ಸಮಾವೇಶಗಳಲ್ಲಿ ಶರಾವತಿ ಕಣಿವೆ ಉಳಿಸಿ ನಿರ್ಣಯ
ಕೈಗೊಳ್ಳಲಾಗಿದೆ. 4 ತಿಂಗಳು ಹಿಂದೆ ಶಿವಮೊಗ್ಗಾದಲ್ಲಿ ಅರಣ್ಯ ಸಚಿವರು, ರಾಜ್ಯ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿದೆ. ಆದಾಗ್ಯೂ ಅರಣ್ಯ ಪರವಾನಿಗೆ ಪ್ರಸ್ತಾವನೆಗೆ ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಲು ಗಡಿಬಿಡಿ ತಯಾರಿ ನಡೆದಿದೆ. ಈಗಾಗಲೇ ಬೃಹತ್ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡಲಾಗಿದೆ.
ನಾಲ್ಕು ವರ್ಷ ಹಿಂದೆ ವಿಜ್ಞಾನಿಗಳು ಶರಾವತಿ ಕಣಿವೆ ಧಾರಣ ಸಾಮರ್ಥ್ಯ ಮುಗಿದಿದೆ ಎಂದು ಎತ್ತಿ ಹೇಳಿದ್ದಾರೆ, ಮಂಗನ ಕಾಯಿಲೆಯಿಂದ ಜೋಗದ ಸುತ್ತಲಿನ ಹಳ್ಳಿಗಳಲ್ಲಿ ಪ್ರತಿವರ್ಷ
ಸಾಗರ-ಸಿದ್ದಾಪುರ ತಾಲೂಕುಗಳಲ್ಲಿ ಜನ ಸಾಯುತ್ತಿದ್ದಾರೆ. ಶರಾವತಿ ಕಣಿವೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಭಾರೀ ಭೂ ಕುಸಿತ ಸಾಮಾನ್ಯವಾಗಿದೆ. ಶರಾವತಿ ನದಿ ಸಮುದ್ರ ಸೇರುವ ಸ್ಥಳದಿಂದ ಗೇರುಸೊಪ್ಪಾದವರೆಗೆ ನದಿಯಲ್ಲಿ ಉಪ್ಪುನೀರು ಪ್ರತಿವರ್ಷ ಮೇಲೇರುತ್ತಿದೆ. ಭೂಗತ ಯೋಜನೆ ಜಾರಿಯಿಂದ ಗೇರುಸೊಪ್ಪಾ ಡ್ಯಾಂ ನಿಂದ ಬೇಸಿಗೆಯಲ್ಲಿ ನದಿಗೆ ನೀರೇ ಬರುವುದಿಲ್ಲ. ಗೇರುಸೊಪ್ಪಾದಿಂದ ಹೊನ್ನಾವರದವರೆಗೆ ಶರಾವತಿ ನದಿ ಉಪ್ಪು ನೀರಿನ ನದಿ ಆಗಲಿದೆ ಎಂಬ ಸಂಗತಿ ರೈತರಿಗೆ, ಮೀನುಗಾರರಿಗೆ ತಿಳಿದೇ ಇಲ್ಲ. ಆದರೆ ಈ ಬಗ್ಗೆ ಗೊತ್ತಿದ್ದೂ, ಜನಪ್ರತಿನಿಧಿಗಳು ಇತ್ತೀಚಿನ ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ 21ನೇ ಶತಮಾನದ ಆರಂಭದಲ್ಲೇ ಶರಾವತಿ ನದಿ ನೀರಿನ ಕಣಿವೆ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ನೀಡಿದೆ. ಈ ವರದಿಯನ್ನು ಕರ್ನಾಟಕ ಪವರ್ ಕಾರ್ಪೋರೇಶನ್ ಕಪಾಟಿನಲ್ಲಿ ಬೀಗ ಹಾಕಿ ಭದ್ರವಾಗಿ ಇಟ್ಟಿದೆ. ಪರಿಸರ ಸಂಘ ಸಂಸ್ಥೆಗಳು, ರೈತರ ವಿರೋಧ, ಪ್ರತಿಭಟನೆ ಬಗ್ಗೆ ಕೆ.ಪಿ.ಸಿ. ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯ ಅರಣ್ಯ ಪರಿಸರ ಸಚಿವರು ಯೋಜನೆಗೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ. ಉ.ಕ. ಜಿಲ್ಲಾ ಉಸ್ತುವಾರಿ ಸಚಿವರೇ, ತಮ್ಮ ಕ್ಷೇತ್ರದ ಗಂಭೀರ ಜ್ವಲಂತ ಸಮಸ್ಯೆ ಇದು.ಹಾಗಾಗಿ, ಹೊನ್ನಾವರ- ಕುಮಟಾ ಶಾಸಕರು ಕೆನರಾ ಲೋಕ ಸಭಾ ಸದಸ್ಯರು ಶರಾವತಿ ಕಣಿವೆ ರಕ್ಷಣೆಗೆ, ನದಿ ತೀರದ ರೈತರು, ಮೀನುಗಾರರ ಉಳಿವಿಗೆ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.
ಮಲೆನಾಡಿನ ಕರಾವಳಿಯ ರೈತರು, ವನವಾಸಿಗಳು, ಮೀನುಗಾರರ ಹಕ್ಕೊತ್ತಾಯವಿದ್ದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅರಣ್ಯ ಸಚಿವರು ಗೇರುಸೊಪ್ಪಾಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅರಣ್ಯನಾಶ, ಗಣಿಗಾರಿಕೆ, ಬೃಹತ್ ಅಣೆಕಟ್ಟು, ಬೃಹತ್ ಕಾಮಗಾರಿಗಳು, ಹೈವೇಗಳು, ತಂತಿ ಮಾರ್ಗಗಳು, ಜನಸಂಖ್ಯಾ ಒತ್ತಡ, ಒತ್ತುವರಿಯಿಂದ ಈಗಾಗಲೇ ಶರಾವತಿ ಕಣಿವೆ ಛಿದ್ರ ಛಿದ್ರವಾಗಿದೆ, ಸಮಗ್ರ ಸಂರಕ್ಷಣಾ ತಂತ್ರವಾಗಿ ಅರಣ್ಯ ಇಲಾಖೆ ಶರಾವತಿ ಅಭಯಾರಣ್ಯ ವಿಸ್ತರಣೆ ಮಾಡಿದೆ. ಈಗ ಭೂಗತ ಜಲವಿದ್ಯುತ್ ಯೋಜನೆ ಕಣಿವೆಯ ಉಳಿವಿಗೆ ಆತಂಕ ತಂದಿದೆ ಎಂದು ವಿಜ್ಞಾನಿಗಳು ಪರಿಸರ ಕಾರ್ಯಕರ್ತರು ಅಭಿಪ್ರಾಯ ನೀಡಿದ್ದಾರೆ. ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
2025 ಜನವರಿ 2ನೇ ವಾರದಲ್ಲಿ ಗೇರುಸೊಪ್ಪಾ ಮತ್ತು ಹೊನ್ನಾವರಗಳಲ್ಲಿ ಜಾಗೃತಿ ಸಭೆ ಜಾಥಾ ನಡೆಯಲಿದೆ ಎಂದು ವೃಕ್ಷ ಆಂದೋಲನ ತಿಳಿಸಿದೆ.
ಅನಂತ ಹೆಗಡೆ ಅಶೀಸರ, ಪ್ರೊ ಬಿ.ಎಂ. ಕುಮಾರ ಸ್ವಾಮಿ, ಡಾ.ಟಿ.ವಿ.ರಾಮಚಂದ್ರ, ಡಾ.ವೈ.ಬಿ.ರಾಮಕೃಷ್ಣ, ಡಾ. ಪ್ರಕಾಶ್ ಮೇಸ್ತ, ಡಾ.ಕೇಶವ ಹೆಚ್. ಕೊರ್ಸೆ, ಡಾ. ವಾಮನ್ ಆಚಾರ್ಯ, ನಾಗೇಶ್ ಹೆಗಡೆ, ಡಾ.ಬಾಲಚಂದ್ರ ಸಾಯಿಮನೆ, ಡಾ. ಶ್ರೀಪತಿ, ಕೆ. ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ ಮುಂತಾದ ಪರಿಸರ ತಜ್ಞರು, ಸಂಸ್ಥೆಗಳ ಗಣ್ಯರು ಸರ್ಕಾರದ ಮುಂದೆ ಪುನಃ ಹಕ್ಕೊತ್ತಾಯ ಮಂಡಿಸಿದ್ದಾರೆ.
ವರದಿ: ಮಧು ರಾಮ್ ಸೊರಬ