ಜಿಲ್ಲೆನ್ಯೂಸ್

ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬೆಳಕಿಗೆ ತರುವಲ್ಲಿ ಸಿದ್ಧವೃಷಭೇಂದ್ರ ಸ್ವಾಮೀಜಿಗಳ ಪ್ರಮುಖ ಪಾತ್ರ ಮಹತ್ತರ – ಕೋಡಿಮಠದ ಸ್ವಾಮೀಜಿ

ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬೆಳಕಿಗೆ ತರುವಲ್ಲಿ ಸಿದ್ಧವೃಷಭೇಂದ್ರ ಸ್ವಾಮೀಜಿಗಳ ಪ್ರಮುಖ ಪಾತ್ರ ಮಹತ್ತರ – ಕೋಡಿಮಠದ ಸ್ವಾಮೀಜಿ

(SHIVAMOGA): ಸೊರಬ: ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬೆಳಕಿಗೆ ತರುವಲ್ಲಿ ಸಿದ್ಧವೃಷಭೇಂದ್ರ ಸ್ವಾಮೀಜಿಗಳ ಪ್ರಮುಖ ಪಾತ್ರ ಮಹತ್ತರವಾದುದು ಎಂದು ಹಾರನಹಳ್ಳಿ ಮಹಾಸಂಸ್ಥಾನ ಕೋಡಿಮಠದ ಡಾ.ಶಿವಾನಂದ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಶಿವಯೋಗಿ ಕರ್ತೃ ಗದ್ದುಗೆಯ ಶಿಲಾಮಠದ ಲೋಕಾರ್ಪಣೆ ಹಾಗೂ ಚಿನ್ಮಯಾನುಗ್ರಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಡೆಯ ಸಿದ್ಧವೃಷಭೇಂದ್ರ ಸ್ವಾಮೀಜಿ ಮುಂಚೂಣಿಯ ತಪಸ್ವಿಗಳಾಗಿದ್ದು, ನಾಡನ್ನು ಸುತ್ತಿ ಧರ್ಮವನ್ನು ಬಿತ್ತಿ ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಹ ಸ್ವಾಮೀಜಿಯ ನಿರ್ವಿಕಲ್ಪ ಸಮಾಧಿಯ ಕರ್ತೃಗದ್ದುಗೆಗೆ ಶಿಲಾಮಠವನ್ನು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿಯು ಸರಕಾರ ಹಾಗೂ ಭಕ್ತರ ಬಳಿ ದೇಣಿಗೆ ಪಡೆದು ಜಡೆ ಸಂಸ್ಥಾನ ಮಠದಲ್ಲಿ ನಿರ್ಮಿಸಿರುವುದು ಸಂತೋಷದ ವಿಷಯ ಎಂದರು.



ಸಂಸದ ಬಿ.ವೈ.ರಾಘವೇಂದ್ರ ಶಿಲಾಮಠ ಉದ್ಘಾಟಿಸಿ ಮಾತನಾಡಿ, ಇಲ್ಲಿ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಆಧ್ಯಾತ್ಮಿಕ ಹಸಿವನ್ನು ನೀಗಿಸಿವೆ. ಜನರು ನನ್ನನ್ನು ಅಧಿಕಾರಕ್ಕೆ ತಂದಿದ್ದರಿoದ ಜಡೆ ಸಂಸ್ಥಾನ ಮಠದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಲು ಸಾಧ್ಯವಾಗಿದೆ. ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಜೀವಂತ ಸಮಾಧಿ ನೋಡುವ ಭಾಗ್ಯ ಸಿಕ್ಕಿದ್ದು ನಮ್ಮಗಳ ಪುಣ್ಯವಾಗಿದೆ. ನಾಡಿನ ಮಠಗಳಿಗೆ ಯಡಿಯೂರಪ್ಪ ಅವರು ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಅವರನ್ನು ಮಠಾಧೀಶರು, ಸಾರ್ವಜನಿಕರು ಸನ್ಮಾನಿಸಿದರು. ಶೆಗುಣಸಿ ಮಠದ ಡಾ.ಪ್ರಭು ಮಹಾಂತ ಸ್ವಾಮೀಜಿ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಹುಕ್ಕೇರಿ ಮಠದ ಸದಾಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು.



ಕೋಡಿಮಠದ ಶ್ರೀ ಅವರು ಚಿನ್ಮಯಾನುಗ್ರಹ ಮಾಡಿ ಜಡೆ ಸಂಸ್ಥಾನ ಉತ್ತರಾಧಿಕಾರಿ ರುದ್ರದೇವರು ಅವರಿಗೆ ರುದ್ರದೇಶಿಕರು, ಅರಕೇರಿ ವಿರಕ್ತಾಶ್ರಮ ಉತ್ತರಾಧಿಕಾರಿ ಸಿದ್ಧಲಿಂಗದೇವರಿಗೆ ಸಿದ್ಧಲಿಂಗ ದೇಶಿಕರು ಎಂದು ನಾಮಕರಣ ಮಾಡಿದರು. ಶಿವಮೊಗ್ಗ ಬಸವತತ್ವ ಪೀಠದ ಬಸವಮರುಳಸಿದ್ಧ ಸ್ವಾಮೀಜಿ ಉಪನ್ಯಾಸ ನೀಡಿದರು.

ಆನಂದಪುರ ಮುರುಘಾ ಮಠದ ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ, ಕಪನಳ್ಳಿ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಮಮದಾಪುರ ಮಲ್ಲಿಕಾರ್ಜುನ ಮಠದ ಮೌನಮಲ್ಲಿನಾಥ ಸ್ವಾಮೀಜಿ, ತೊಗರ್ಸಿ ಮಠದ ಮಹಾಂತ ದೇಶಿಕೆಂದ್ರ ಸ್ವಾಮೀಜಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ, ಪ್ರಮುಖರಾದ ಡಾ|| ಧನಂಜಯ ಸರ್ಜಿ, ಡಾ|| ಜ್ಞಾನೇಶ್ ಹೆಚ್.ಈ, ಸಿ.ಪಿ.ಈರೇಶಗೌಡ, ಪಾಣಿರಾಜಪ್ಪ, ರಾಜು ತಲ್ಲೂರು, ಬಸವರಾಜ ಭಾರಂಗಿ ಮತ್ತಿತರರಿದ್ದರು.

ವರದಿ: ಸಂದೀಪ ಯು.ಎಲ್., ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ

Leave a Reply

Your email address will not be published. Required fields are marked *

Scan the code