ಕೋಲಾರನ್ಯೂಸ್

ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಿವೆ.

ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಿವೆ.

(KOLARA): ಬಂಗಾರಪೇಟೆ: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರುಗಳ ನಡುವಿನ ವೈಮನಸ್ಸು ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಈ ಒಳಜಗಳದಿಂದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಿವೆ.

ಕೋಮುಲ್‌ನ ಕ್ಷೇತ್ರ ವಿಂಗಡಣೆ ಸಂಬಂಧ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಶುರುವಾದ ಕಿತ್ತಾಟ ಇದೀಗ ಅಲ್ಲಿನ ಅಕ್ರಮಗಳು ಬೆಳಕಿಗೆ ಬರುವಂತೆ ಮಾಡಿದೆ.ಜಮೀನು ವಾಪಸ್ಸಿಗೆ ಶಾಸಕ ಎಸ್.ಎನ್ ಆಗ್ರಹ.ಕೋಲಾರ ತಾಲೂಕು ಹುತ್ತೂರು ಹೋಬಳಿ ಹೊಳಲಿಯ ಸರ್ವೇ ನಂ.103ರಲ್ಲಿ ಕೋಚಿಮುಲ್ ಗೆ 2015ರಲ್ಲಿ ಆಗಿನ ಡಿಸಿ ಡಿ.ಕೆ.ರವಿ ನೀಡಿದ್ದ 50 ಎಕರೆ ಜಮೀನನ್ನು ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಶಾಸಕ ಎಸ್.ಎನ್ ನಾರಾಯಣಸ್ವಾಮಿ  ಡಿ.19ರಂದು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಪತ್ರ ಬರೆದಿದ್ದು, ಸ.ನಂ 103ರಲ್ಲಿ ಕೋಮುಲ್‌ನಿಂದ 18 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಗಮನಾರ್ಹ. ಆದರೆ, ಆಗಿನ ಜಿಲ್ಲಾಧಿಕಾರಿ ಅಧಿಕಾರ ಇಲ್ಲದಿದ್ದರೂ ಹೊಳಲಿಯಲ್ಲಿ 50 ಎಕರೆ ಭೂಮಿ ಅಕ್ರಮವಾಗಿ ಒಕ್ಕೂಟಕ್ಕೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸದರಿ ಭೂಮಿಯನ್ನು ಹಾಲು ಒಕ್ಕೂಟಕ್ಕೆ ಹಸಿರು ಮೇವು ಉತ್ಪಾದಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1984ರ ಕಲಂ 71ರ ಅಡಿ ಮಂಜೂರು ಮಾಡಿದ್ದಾರೆ.ಈ ಭೂಮಿಯನ್ನು ಮಂಜೂರಾದ ಮೂರು ವರ್ಷದೊಳಗೆ ನಿರ್ದಿಷ್ಟಪಡಿಸಿದ ಉದ್ದೇಶಕ್ಕೆ ಮಾತ್ರ ಬಳಸಬೇಕು. ಷರತ್ತು ಮೀರಿದರೆ ಕಂದಾಯ ಇಲಾಖೆಯು ವಶಪಡಿಸಿಕೊಳ್ಳುವ ಅಧಿಕಾರ ಹೊಂದಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ವಾಸ್ತವವಾಗಿ ಜಿಲ್ಲಾಧಿಕಾರಿಗೆ 50 ಎಕರೆ ಭೂಮಿ ಮಂಜೂರು ಮಾಡುವ ಅಧಿಕಾರವೇ ಇಲ್ಲದಿದ್ದರೂ ಭೂಮಿ ನೀಡಿದ್ದಾರೆ ಎಂದು ಶಾಸಕರು ದೂರಿದ್ದಾರೆ.

ನಿಯಮ ಮೀರಿ 50 ಎಕರೆ ಮಂಜೂರು ಮಾಡಿ ಮತ್ತು ಅಲ್ಲಿ ಇತರರ ಜಾಗ ಕಬಳಿಸಿ ಸೋಲಾರ ವಿದ್ಯುತ್ ಘಟಕ ನಿರ್ಮಾಣ ಮಾಡುತ್ತಿರುವ ಕೋಚಿಮುಲ್ ಹಾಗೂ ಅದಕ್ಕೆ ಸಹಕರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಸೋಲಾ‌ರ್ ಘಟಕದ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಬೇಕು.ಆ ಜಾಗವನ್ನು ಬಡ ರೈತರಿಗೆ ಹಂಚಬೇಕು ಎಂದು ಶಾಸಕರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸರ್ವೇ ನಂಬರ್‌ನ 15ಯಲ್ಲಿ ಬಡವರಿಗೆ ಭೂಮಿ ಹಂಚಿಕೆ ಮಾಡಿ ನವಗ್ರಾಮ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರೇಣುಕಾ ಯಲ್ಲಮ್ಮ ಬಳಗದ ಅನುಕೂಲಕ್ಕಾಗಿ 25 ಎಕರೆ ಭೂಮಿಯನ್ನು ದೇವಾಲಯ ಮತ್ತು ಸಮದಾಯ ಭವನಕ್ಕೆ ಮಂಜೂರು ಮಾಡಬೇಕು ಎಂದು ಎರಡು ವರ್ಷದ ಹಿಂದೆಯೇ ತಹಸೀಲ್ದಾ‌ರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಕಾನೂನು ಬಾಹಿರ.
ಹೊಳಲಿ ಗ್ರಾಮದ ಸ.ನಂ 103ರಲ್ಲಿ ಒಟ್ಟು 650 ಎಕರೆ ಭೂಮಿ ಇದ್ದು, ಇದೇ ಸ್ಥಳದಲ್ಲಿ ಅನೇಕ ರೈತರಿಗೆ, ಕ್ರಿಕೆಟ್ ಸ್ಟೇಡಿಯಂಗೆ, ಸಮಾಜ ಕಲ್ಯಾಣ ಇಲಾಖೆಯ ಮುರಾರ್ಜಿ ವಸತಿ ಶಾಲೆ, ತೋಟಗಾರಿಕಾ ಇಲಾಖೆಗೆ ಭೂಮಿ ಮಂಜೂರು ಮಾಡಲಾಗಿದೆ.ಯಾರಿಗೂ 10 ಎಕರೆಗಿಂತ ಹೆಚ್ಚು ಭೂಮಿ ಮಂಜೂರು ಮಾಡಿಲ್ಲ.ಆದರೆ ಹಾಲು ಒಕ್ಕೂಟಕ್ಕೆ ಸರ್ಕಾರದ ಅನುಮತಿ ಪಡೆಯದೇ 50 ಎಕರೆ ನೀಡಿರುವುದು ಕಾನೂನು ಬಾಹಿರ ಎಂದು ಶಾಸಕರು ಆರೋಪಿಸಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code