ಕೋಲಾರನ್ಯೂಸ್

ಫೆಂಗಲ್ ಚಂಡಮಾರುತಕ್ಕೆ ನಡುಗಿದ ಜಿಲ್ಲೆಯ ಜನತೆ, ರೈತರು.

ಫೆಂಗಲ್ ಚಂಡಮಾರುತಕ್ಕೆ ನಡುಗಿದ ಜಿಲ್ಲೆಯ ಜನತೆ, ರೈತರು.


(KOLARA): ಬಂಗಾರಪೇಟೆ : ಫೆಂಗಲ್ ಚಂಡಮಾರುತ ತಮಿಳುನಾಡಿನ ಕರಾವಳಿ, ಪುದುಚೆರಿಯಲ್ಲಿ ಅಪ್ಪಳಿಸಿರುವ ಹಿನ್ನೆಲೆ ಕೋಲಾರ ಜಿಲ್ಲೆಯಲ್ಲೂ ಕೆಲವೆಡೆ ಮಳೆಯಾಗಿದ್ರೆ ಹಲವೆಡೆ ಮಳೆಯಾಗಿದೆ. ತಮಿಳುನಾಡು, ಪುದುಚೆರಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಫೆಂಗಲ್ ಚಂಡಮಾರುತದ ಪರಿಣಾಮ ತಾಲ್ಲೂಕಿನ ಮೇಲೆ ಬೀರಿದೆ.

ತಾಲ್ಲೂಕಿನಾದ್ಯಂತ ಶನಿವಾರ ಮಾತ್ರವಲ್ಲದೆ ಭಾನುವಾರವು ಸಹ ಮುಂಜಾನೆಯಿಂದ ರಾತ್ರಿಯ ವರಗೆ ಮಳೆಯ ಹನಿಗಳು ಸುರಿಯುತ್ತಿದ್ದು ,ಹೆಚ್ಚಿನ ಚಳಿಗೆ ಜನರು ನಡುಗಿದ್ದಾರೆ. ಜನರು ಮನೆಯಿಂದ ಹೊರಗೆ ಬರದೇ ಮನೆಯಲ್ಲಿಯೇ ಇದ್ದರು ಇನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜನರು ಯಾರು ಇಲ್ಲದೆ ಬಿಕೋ ಎನ್ನುತ್ತಿದೆ.

ತಾಲೂಕಿನಾದ್ಯಂತ ಐದಾರು ದಿನಗಳಿಂದ ಮೋಡಕವಿದ ವಾತಾವರಣ ಹಾಗೂ ನೆನ್ನೆ ಸಂಜೆಯಿಂದ ಜಡಿ ಮಳೆಯಾಗುತ್ತಿದೆ. ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಾಲು, ಪೇಪರ್‌ ಮಾರುವವರು ಹಾಗೂ ರಸ್ತೆಬದಿ ವ್ಯಾಪಾರಿಗಳು ಸಂಕಟ ಅನುಭವಿಸುವಂತಾಗಿದೆ.

ಹೊಟ್ಟೆಗೆ ತಣ್ಣೀರು ಬಟ್ಟೆ : ಜಡಿ  ಮಳೆಯಿಂದ ರಸ್ತೆ ಬದಿ ವ್ಯಾಪಾರ ವಹಿವಾಟು ನಡೆಸುವ ತರಕಾರಿ, ಹೂ, ಹಣ್ಣು ಇನ್ನೂ ಮುಂತಾದ ಸಣ್ಣ ಪುಟ್ಟ ವ್ಯಾಪಾರಿಗಳು ವಹಿವಾಟು ನಡೆಸಲಾಗದೇ ಬಂಡವಾಳ ಹಾಕಿದ ವಸ್ತುಗಳು ಕೊಳೆಯುತ್ತಿದ್ದು ನಷ್ಟ ಅನುಭವಿಸುವಂತಾಗಿದೆ. ಪಟ್ಟಣದ ಅಂಗಡಿ ಮಳಿಗೆಗಳೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿದೆ. ಎಪಿಎಂಸಿ ತರಕಾರಿ ಸೇರುವ ಮುಂಜಾನೆ ಮಾರುಕಟ್ಟೆಯ ವ್ಯಾಪಾರ ವಹಿವಾಟು ಕೂಡ ನೀರಸವಾಗಿತ್ತು.


ಹಾಲು,ಪೇಪರ್ ವಿತರಕರ ಸಂಕಟ : ಮುಂಜಾನೆಯೇ ಎದ್ದು ಹಾಲು, ಪೇಪರ್‌ಗಳನ್ನು ಮನೆಬಾಗಿಲಿಗೆ ತಲುಪಿಸುವವರ ಕಷ್ಟ ಹೇಳ ತೀರದ್ದಾಗಿದೆ. ಕೊರೆಯುವ ಚಳಿ, ಜಡಿ ಮಳೆಯಲ್ಲಿ ನೆನೆದುಕೊಂಡು.ದಿನನಿತ್ಯದ ವ್ಯಾಪಾರವನ್ನು ನಡೆಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ರೈತರು ಕಂಗಾಲು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ತಾಲ್ಲೂಕಿನಲ್ಲಿ ಅತಿ ಹೆಚ್ಚು ರಾಗಿಯನ್ನು ಬೆಳೆದಿರುವ ರೈತರು ಕಂಗಾಲಾಗಿದ್ದಾರೆ.

ಮಳೆ ನಿಂತರೆ ಮಾತ್ರವೇ ಉತ್ತಮ ಫಸಲು ದೊರೆಯುತ್ತದೆ. ನವೆಂಬರ್ ಅಂತ್ಯಕ್ಕೆ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಬೆಳೆ ಕಟಾವು ಮಾಡಬೇಕಿದೆ. ಇದೀಗ ಮಳೆಯಿಂದ ತಾಲೂಕಿನಲ್ಲಿ ಬೆಳೆದಿರುವ ರಾಗಿಯೂ ಮಳೆಯಿಂದಾಗಿ ನೆಲಕ್ಕೂ ಉರಳುವ ಸಾಧ್ಯತೆ ಹೆಚ್ಚಾಗಿರುವುದರಿಂದ. ಇದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.


ದೇಶಿಹಳ್ಳಿ ರೈತ ಪ್ರವೀಣ್ ಗೌಡ ಮಾತನಾಡಿ, ರಾಗಿಯು ತೆನೆ ಸಮೇತ ನೆಲಕ್ಕೆ ಬೀಳುವುದರಿಂದ ಮಣ್ಣಿನೊಂದಿಗೆ ಸಂಪರ್ಕ ಹೊಂದಿ ತೆನೆಯಲ್ಲಿರುವ ಕಾಳುಗಳು ಪುನಃ ಮೊಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ, ಹೆಚ್ಚಿನ ಮಳೆ ಬರುವುದರಿಂದ ತೆನೆ ಸ್ವಾದ ಕಳೆದುಕೊಳ್ಳವ ಸಾಧ್ಯತೆಯಿದೆ. ಇನ್ನೂ ರಾಗಿ ಬೆಳೆ ಕಟಾವು ಮಾಡಲು ಹಾರ್ವೆಸ್ಟಿಂಗ್ ಯಂತ್ರಗಳನ್ನು ಬಳಸುತ್ತಿದ್ದು ಸಂಪೂರ್ಣ ಗುಣಮಟ್ಟದ ರಾಗಿ ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಕೂಲಿಯಾಳುಗಳನ್ನು ಬಳಸಿ ಕಟಾವು ಮಾಡುವುದು ಸಾಹಸವೇ ಸರಿ. ರಾಗಿ ನೆಲಕ್ಕೆ ಮಲಗುವುದರಿಂದ ಕಟಾವಿಗೆ ತೊಂದರೆ ಆಗುತ್ತದೆ.ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದುರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code