ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪುರುಷ-ಮಹಿಳೆಯರಿಗೆ ಒಂದೇ ಶೌಚಾಲಯ!
(KOLARA): ಬಂಗಾರಪೇಟೆ :ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪುರುಷರ ಶೌಚಾಲಯಕ್ಕೆ ರಿಪೇರಿ ನೆಪದಲ್ಲಿ ಬೀಗ ಹಾಕಿರುವುದರಿಂದ ಮಹಿಳೆಯರ ಶೌಚಾಲ ಯವನ್ನೇ ಪುರುಷರೂ ಉಪಯೋಗಿಸುತ್ತಿರುವುದರಿಂದ ಎರಡೂ ಕಡೆಯವರಿಗೆ ಇರುಸು ಮುರುಸು ಉಂಟಾಗುತ್ತಿದೆ.
ಕಳೆದ 10 ದಿನಗಳಿಂದ ಈ ಸಮಸ್ಯೆ ಎದುರಾಗಿದ್ದು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿರುವುದರಿಂದ ಪುರುಷರ ಶೌಚಾಲಯ ರಿಪೇರಿ ಬೇಗನೇ ಆಗದ ಕಾರಣ ಈ ತೊಂದರೆ ಉಂಟಾಗಿದೆ. ಪ್ರತಿನಿತ್ಯ ನೂರಾರು ಮಂದಿ ಪ್ರಯಾಣಿಕರು ತಂತಮ್ಮ ಊರುಗಳಿಗೆ ಹೋಗಲು ಬಸ್ತ್ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು, ಈ ಮಧ್ಯೆ ಪುರುಷ ಮತ್ತು ಮಹಿಳಾ ಪ್ರಯಾಣಿಕರು ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಲ್ಲಿ ಎರಡು ಕಡೆಯವರೂ ಮಹಿಳಾ ಶೌಚಾಲಯವನ್ನೇ ಆಶ್ರಯಿಸಬೇಕಾಗಿದೆ.
ಮಹಿಳೆಯರು ಶೌಚಾಲಯಕ್ಕೆ ಹೋಗಿ ಬರುವವರೆಗೂ ಪುರಷರು ಹೊರಗಡೆ ಕಾದಿರಬೇಕು. ತುರ್ತಾಗಿ ಪ್ರಕೃತಿ ಕರೆಯನ್ನು ತೀರಿಸಿಕೊಳ್ಳಲು ಶೌಚಾಲಯಕ್ಕೆ ಹೋಗಲು ಸಾಧ್ಯವಾಗದೆ ಇರುವಾಗ ಬಸ್ ನಿಲ್ದಾಣ ಕಟ್ಟಡ ಹಿಂಭಾಗ, ಅಕ್ಕ ಪಕ್ಕದಲ್ಲೇ ಮೂತ್ರ ವಿಸರ್ಜನೆಗೆ ಮುಂದಾಗಿದ್ದಾರೆ. ಇದರಿಂದ ಬಸ್‌ನಿಲ್ದಾಣ ಸಮೀಪ ಶೌಚಾಲಯದ ಪ್ರತ್ಯೇಕ ದುರ್ವಾಸನೆ ಹರಡುತ್ತಿದೆ. ಇದರಿಂದ ನಾಗರೀಕರು ಮೂಗನ್ನು ಮುಚ್ಚಿಕೊಂಡು
ದುರ್ವಾ ಸನೆಯನ್ನು ತಡೆದುಕೊಳ್ಳುವ ಕಸರತ್ತು ಮಾಡುತ್ತಿದ್ದಾರೆ. ಪುರುಷರ ಶೌಚಾಲಯ ಕೆಟ್ಟು ಹೋಗಿದ್ದ ಹಿನ್ನಲೆಯಲ್ಲಿ ದುರಸ್ತಿ ನಡೆಯುತ್ತಿದ್ದು, ಒಳಗಡೆ ಇದ್ದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಆದರೆ ಕಾಮಗಾರಿ ನಡೆಯುತ್ತಿರುವುದರಿಂದ ಪುರುಷರ ಶೌಚಾಲಯ ಇಲ್ಲದೆ ಇಂತಹ ಸಮಸ್ಯೆ ಎದುರಾಗಿದೆ. ಈಗಲಾದರೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೆ ಪುರುಷರ ಶೌಚಾಲಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಮಸ್ಯೆಯನ್ನು ಬಗೆ ಹರಿಸಬೇಕು. ಅಲ್ಲಿಯವರೆಗೂ ಪುರುಷರು ಮತ್ತು ಮಹಿಳೆಯರಿಗೆ ತಾತ್ಕಾಲಿಕವಾದ ಶೌಚಾಲಯ ಒದಗಿಸಬೇಕು ಎಂಬುದು ನಾಗರಿಕರ ಮತ್ತು ಪ್ರಯಾಣಿಕರ ಒತ್ತಾಯವಾಗಿದೆ.
ವರದಿ: ವಿಷ್ಣು ಕೋಲಾರ