ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾದ ಯುವಕ.
(SHIVAMOGA): ಕ್ಯಾಂಟರ್ ಚಾಲನೆ ವೃತ್ತಿ ಮಾಡಿಕೊಂಡು ಮನೆಗೆ ಆಧಾರವಾಗಿದ್ದ ಯುವಕನೋರ್ವ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ತಾಲೂಕಿನ ಸುತ್ತಕೋಟೆ ಗ್ರಾಮದಲ್ಲಿ ನಡೆದಿದೆ.
ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತಪಟ್ಟ ಕ್ಯಾಂಟರ್ ಚಾಲಕ. ಬಳ್ಳಿಗಾವಿಯಿಂದ ಸುತ್ತುಕೋಟೆ ಹೋಗುವ ಮಾರ್ಗದಲ್ಲಿ ಕ್ಯಾಂಟರ್‍ನಲ್ಲಿ ಹುಲ್ಲು ತುಂಬಿಕೊಂಡು ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್‍ಗೆ ತಗುಲಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಕ್ಯಾಂಟರ್ ಚಾಲಕ ಮೊಹಮ್ಮದ್ ಈಶಾಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಿಗದಿತ ಎತ್ತರಕ್ಕಿಂತ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್‍ಗೆ ತಗುಲಿರುವುದೇ ಘಟನೆಗೆ ಕಾರಣ. ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಮೃತನ ತಂದೆ ರಿಯಾಜ್ ಅಹ್ಮದ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದಡೆ ಬಡತನ, ಮತ್ತೊಂದಡೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮೊಹಮ್ಮದ್ ಈಶಾಮ್ ಸಾವು ಅವರ ಪತ್ನಿಯನ್ನು ಕಣ್ಣಿರಲ್ಲಿ ಕೈತೊಳೆಯುವಂತೆ ಮಾಡಿದೆ. ಪ್ರಪಂಚದ ಅರಿವೇ ಇಲ್ಲದ ಎರಡು ವರ್ಷದ ಹೆಣ್ಣು ಮಗು ಮತ್ತು ಒಂದು ವರ್ಷದ ಗಂಡು ಮಗುವನ್ನು ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ತಂದೆ ಇಲ್ಲದ ತಬ್ಬಲಿಯನ್ನಾಗಿಸಿದೆ.
ವರದಿ: ಮಧು ರಾಮ್ ಸೊರಬ