ಮನೆಯಲ್ಲಿದ್ದ ಚಿನ್ನದ ಒಡವೆಗಳು ಕದ್ದು ಮನೆಯನ್ನು ಪುನ: ಯಥಾಸ್ಥಿತಿಯಲ್ಲಿಟ್ಟು ಪರಾರಿಯಾದ ಕಳ್ಳರು
(KOLARA): ಬಂಗಾರಪೇಟೆ: ಪಟ್ಟಣದ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ನಡೆಯುತ್ತಿರುವ ಒಂಟಿ ಮನೆಕಳ್ಳತನದಿಂದ ನಾಗರೀಕರು ಹೈರಾಣಾಗಿದ್ದು ಜೀವನ ನಡೆಸಲು ಕಷ್ಟಕರವಾದ ಸನ್ನಿವೇಶ ಎದುರಾಗಿದೆಯೆಂದು ಪುನೀತ್ ನಗರದ ಬಾಲಮ್ಮ ತಮ್ಮ ನೋವನ್ನು ವ್ಯಕ್ತಪಡಿಸಿದರು.
ಪಟ್ಟಣದ ಅಮರಾವತಿ ಬಡಾವಣೆ, ದೇಶಿಹಳ್ಳಿ ಮತ್ತು ರೈಲ್ವೇಗೇಟ್ ಸಮೀಪದ ಪುನೀತ್ ನಗರದಲ್ಲಿ ಸತತ ಮೂರು ದಿನಗಳಿಂದ ಒಂಟಿ ಮನೆಕಳ್ಳತನ ನಡೆಯುತ್ತಿದ್ದು ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಕದ್ದು ಮನೆಯನ್ನು ಪುನ: ಯಥಾಸ್ಥಿತಿಯಲ್ಲಿಟ್ಟು ಪರಾರಿಯಾಗುತ್ತಿರುವ ಘಟನೆಗಳು ಜರುಗುತ್ತಿವೆ.
ಪಟ್ಟಣದ ದೇಶಿಹಳ್ಳಿ ದಕ್ಷಿಣ ಭಾಗದ ಪುನೀತ್‌ನಗರದ ಮೊದಲನೆ ಕ್ರಾಸ್‌ನಲ್ಲಿರುವ ದಂಪತಿಗಳು ಶನಿವಾರ ಮುಂಜಾನೆ 9:00 ಘಂಟೆಗೆ ತಿರುಪತಿ ದರ್ಶನಕ್ಕೆ ಹೋಗಿದ್ದು ಭಾನುವಾರ ಸಂಜೆ 9:30 ಘಂಟೆಗೆ ಮನೆಗೆ ವಾಪಸ್ಸು ಬಂದಾಗ ಕಾಂಪೌಂಡ್ ಗೇಟಿನ ಬೀಗ ತೆಗೆದ ರೂಪದಲ್ಲಿದ್ದು ಅನುಮಾನಕ್ಕೆ ಕಾರಣವಾಗಿದೆ. ನಂತರ ಗೇಟನ್ನು ತೆರೆದು ಒಳ ಹೋಗಿ ನೋಡಿದಾಗ ಮುಖ್ಯದ್ವಾರದ ಬಾಗಿಲನ್ನು ದೊಡ್ಡದಾದ ರಾಡ್‌ನಿಂದ ಒಡೆದು ಒಳ ಪ್ರವೇಶಿಸಿದ್ದಾರೆ. ನೇರ ಕೊಠಡಿಯೊಳಗೆ ಹೋಗಿದ್ದು ಬೀರುವಿನ ಬಾಗಿಲನ್ನು ರಾಡ್‌ನಿಂದ ಒಡೆದು ಅದರಲ್ಲಿದ್ದ 20 ಗ್ರಾಂ ತೂಕದ ಬಂಗಾರದ ನಾಣ್ಯಗಳು, ಬೆಳ್ಳಿಯ 3 ಜೊತೆ ಕಾಮಾಕ್ಷಿ ದೀಪಗಳು, 4 ಜೊತೆ ಕುಂಕುಮ ಭರಣಿ, 5 ಗ್ರಾಂ ತೂಕದ 2 ಬೆಳ್ಳಿ ನಾಣ್ಯಗಳು, ಉದ್ದನೆಯ ಬೆಳ್ಳಿ ಜ್ಯೋತಿ ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಅದೇ ರೀತಿಯಾಗಿ ಭಾನುವಾರದಂದು ಮುಂಜಾನೆ 3:00 ಗಂಟೆ ಸಮಯದಲ್ಲಿ ದೇಶಿಹಳ್ಳಿ ಆರ್.ಕೆ.ಎನ್ ರೈಸ್ ಮಿಲ್ ಹಿಂಭಾಗವಿರುವ ನಿಪ್ಪಟ್ಟು ಹರೀಶ್ ಎಂಬುವರ ಮನೆಗೆ ಕಳ್ಳನೊಬ್ಬ ಪ್ರವೇಶಿಸಿದ್ದಾನೆ. ಹರೀಶ್ ಕುಟುಂಬಸ್ಥರು ಮನೆಗೆ ಅಳವಡಿಸಿದ್ದ ಸಿ.ಸಿ ಟಿ.ವಿಯ ಕ್ಯಾಮೆರಾ ಕೆಲಸ ಮಾಡದೆ ಇರುವುದನ್ನು ಗಮನಿಸಿ ಪರೀಕ್ಷಿಸಲಾಗಿ ಕ್ಯಾಮೆರಾ ಬೇರೊಂದು ದಿಕ್ಕಿಗೆ ತಿರುಗಿರುವುದು ಪತ್ತೆಯಾಗಿದೆ. ಅನುಮಾನಗೊಂಡು ಸಿ.ಸಿ ಟಿ.ವಿ ಪರೀಕ್ಷಿಸಿದಾಗ ಮಂಕಿ ಕ್ಯಾಪ್ ವೇಷದಾರಿಯೊಬ್ಬ ಕೈಯಲ್ಲಿ ರಾಡ್‌ವೊಂದನ್ನು ಹಿಡಿದು ಮನೆಗೆ ಪ್ರವೇಶಿಸಿರುವುದು ಪತ್ತೆಯಾಗಿದೆ. ಇದೇ ವ್ಯಕ್ತಿ ವ್ಯಕ್ತಿ ಭಾನುವಾರ ಬೆಳಿಗ್ಗೆ 2ಘಂಟೆ ಸಮಯದಲ್ಲಿ ಪಕ್ಕದ ರಸ್ತೆಯಲ್ಲಿ ಓಡಾಡಿರುವುದು ಬೇರೊಂದು ಸಿ.ಸಿ ಕ್ಯಾಮೆರಾದಲ್ಲಿ ಗೊತ್ತಾಗಿದೆ.
ಕಳೆದ ಎರಡು ತಿಂಗಳು ಹಿಂದೆ ಅಮರಾವತಿ ಬಡಾವಣೆಯಲ್ಲಿ ನಡೆದ ಮನೆ ಕಳ್ಳತನ ಕೃತ್ಯದಿಂದ ಎಚ್ಚೆತ್ತುಕೊಂಡ ಬಂಗಾರಪೇಟೆ ಪೋಲಿಸರು ಕೆಲವೊಂದು ಪ್ರಮುಖ ರಸ್ತೆಗಳಲ್ಲಿ ಬಂದೋಬಸ್ತು ಮಾಡಿದ್ದರು. ಅಂದಿನಿಂದ ಕಳ್ಳತನದ ಕೇಸು ಪತ್ತೆಯಾಗಿರಲಿಲ್ಲ. ಕಳೆದ ಎರಡು ದಿನಗಳಿಂದ ಪೆಂಗಲ್ ವಾಯುಭಾರಕುಸಿತದಿಂದ ಸುರಿಯುತ್ತಿರುವ ಮಳೆಯಿಂದ ಪೋಲಿಸರು ಇಲ್ಲದಿರುವುದನ್ನು ಗಮನಿಸಿದ ಕಳ್ಳ ತನ್ನ ಕೈಚಳಕ ತೋರಿಸಿದ್ದು ನಾಗರೀಕರನ್ನು ಮತ್ತು ಪೋಲಿಸ್ ಇಲಾಖೆಯನ್ನು ನಿದ್ದೆಗೆಡಿಸಿದ್ದಾನೆ.
ನಾಗರೀಕರು ತಮ್ಮ ಮನೆಗಳಿಗೆ ಎಷ್ಟೇ ಹಗುರವಾದ ಗೇಟ್ ಮತ್ತು ಬೀಗಗಳನ್ನು ಹಾಗೂ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಕಳ್ಳರು ತಮ್ಮ ಬುದ್ದಿವಂತಿಕೆ ಪ್ರದರ್ಶಿಸುತ್ತಿರುವುದು ಸಾಭೀತಾಗಿದೆ. ಮನೆಗಳಲ್ಲಿ ಏನು ಇಡಬೇಕು, ಇಡಬಾರದೆಂಬ ಲೆಕ್ಕಚಾರಗಳು ಹಾಗೂ ದೂರದ ಊರುಗಳಿಗೆ ಹೋಗುವಾಗ ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕೆಂಬ ಲೆಕ್ಕಾಚಾರಗಳು ಪ್ರತಿಯೊಂದು ಮನೆಯಲ್ಲಿಯೂ ಶುರುವಾಗಿದೆ. ಹಿರಿಯರು ಹೇಳಿದ ಹಾಗೆ ಪೋಲಿಸರು ಚಾಪೆ ಕೆಳಗೆ ನುಸುಳಿದರೆ ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಾರೆಂಬ ಗಾಧೆ ಮಾತು ಈ ಘಟನೆಗಳನ್ನು ನೋಡುತ್ತಿದ್ದರೆ ನೆನಪಾಗುತ್ತದೆ.
ವರದಿ: ವಿಷ್ಣು ಕೋಲಾರ