ಮಾಜಿ ಪ್ರಧಾನಿ ಸ್ಮರಣಾರ್ಥ ಇಂದು ಕೃಷಿ ಇಲಾಖೆ ವತಿಯಿಂದ ರೈತ ದಿನಾಚರಣೆ
(CHIKKAMAGALURU): ಬಂಗಾರಪೇಟೆ: ಮಾಜಿ ಪ್ರಧಾನಿ ಚರಣ್‌ಸಿಂಗ್ ಚೌಧರಿ ಅವರ ಸ್ಮರಣಾರ್ಥ ಇಂದು ಕೃಷಿ ಇಲಾಖೆ ವತಿಯಿಂದ ರೈತ ದಿನಾಚರಣೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಜಾರೆಡ್ಡಿ ಹೇಳಿದರು.
ಪಟ್ಟಣದ ಕೃಷಿಕ ಸಮಾಜದ ಕಟ್ಟಡದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ತರಬೇತಿಗಳನ್ನು ನೀಡಿ,ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವಂತೆ ಮಾಡುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.ಹಾಗೂ ಯುವ ಜನತೆ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗುವಂತೆ ಮಾಡಿ ಕೃಷಿ ಕ್ಷೇತ್ರವನ್ನು ಹೆಚ್ಚು ಬಲಗೊಳಿಸುವ ಕೆಲಸ ವಾಗಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ ಮಾತನಾಡಿ,ರೈತ ದೇಶದ ಬೆನ್ನೆಲುಬು.ಎನ್ನುತ್ತಾರೆಯೇ ವಿನಾ ಬೆನ್ನೆಲುಬಿಗೆ ಅಗತ್ಯವಿರುವ ಸೌಕರ್ಯ ನೀಡುತ್ತಿಲ್ಲ.ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಗಳು ಆಗದಿರುವುದು ಬೇಸರ ಉಂಟು ಮಾಡಿದೆ.ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸಕಾಲಕ್ಕೆ ಸರಿಯಾಗಿ ಮಳೆರಾಯ ಸ್ವಂದಿಸುತ್ತಿಲ್ಲ. ಇತ್ತ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರ ಇಲ್ಲ.ಬೆಳೆಗಳಿಗೆ ನಿಗದಿತ ಬೆಲೆ ಸಿಗುತ್ತಿಲ್ಲ. ಇನ್ನು ರೈತರು ಬದುಕುವುದಾದರೂ ಹೇಗೆ, ಭೂಮಿಯನ್ನು ನಂಬಿರುವ ರೈತ ತನ್ನ ದುಡಿಮೆಯಿಂದ ಬರುವ ಲಾಭವನ್ನು ಮತ್ತೆ ಕೃಷಿ ಮೇಲೆ ಬಂಡವಾಳ ಹಾಕಿ ಇನ್ನಷ್ಟು ಬೆಳೆದು ದೇಶಕ್ಕೆ ಅನ್ನ ಒದಗಿಸಲು ಮುಂದಾಗುತ್ತಾನೆ.ಆದರೆ ಸರಿಯಾದ ಬೆಂಬಲ ಬೆಲೆ ಇಲ್ಲದ ಪರಿಣಾಮ ನಷ್ಟದ ಸುಳಿಗೆ ಸಿಲುಕುತಿದ್ದಾನೆ ಎಂದರು.
ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಸೂಕ್ತ ಮಾರುಕಟ್ಟೆ, ನೀರಿನ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಸಾಧ್ಯ.ಇಂದು ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಎಷ್ಟೋ ರೈತರು ಕೃಷಿ ಬಿಟ್ಟು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರ ರೈತರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಪ್ರತಿಭಾ, ತೋಟಗಾರಿಕೆ ಇಲಾಖೆಯ ಅಧಿಕಾರಿ ಶಿವಾರೆಡ್ಡಿ ಹಾಗೂ ರೈತರು ಇದ್ದರು.
ವರದಿ: ವಿಷ್ಣು ಕೋಲಾರ