ಮುಂದಿನ ಪ್ರಾಕೃತಿಕ ದಿನಮಾನಗಳಿಗೆ ಅಡಿಯಿಡುವ ಸೂಚ್ಯದ ಹಬ್ಬ ಉಗಾದಿ
(SHIVAMOGA): ಸೊರಬ: ಪ್ರಕೃತಿಯ ಬದಲಾವಣೆಯ ಜೊತೆಗೆ ಸಂಭ್ರಮಿಸುವ, ಮುಂದಿನ ಪ್ರಾಕೃತಿಕ ದಿನಮಾನಗಳಿಗೆ ಅಡಿಯಿಡುವ ಸೂಚ್ಯದ ಹಬ್ಬ ಉಗಾದಿ. ಹಾಗಾಗಿಯೆ ಹಿಂದುಗಳಿಗೆ ಈ ದಿನ ವರ್ಷದ ಕೊನೆಯ ಮತ್ತು ವರ್ಷದ ಆರಂಭದ ದಿನ ಎಂದು ಡಾ.ಉಮೇಶ್ ಭದ್ರಾಪುರ ಹೇಳಿದರು.
ತಾಲ್ಲೂಕು ಕಾನಗೋಡು ಮಂಜಪ್ಪ ಶಿಕ್ಷಕರ ಆತಿಥ್ಯದಲ್ಲಿ ಕಸಾಪ ವತಿಯಿಂದ ನಡೆದ ಉಗಾದಿ ಸಂಭ್ರಮ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಹಬ್ಬಗಳು ಕೇವಲ ಧಾರ್ಮಿಕ ಆಚರಣೆಯಷ್ಟೆ ಅಲ್ಲ ಸಂಬಂಧಗಳನ್ನು ಬೆಸೆಯುವ, ಮಾನವಿಕ ಮೌಲ್ಯವನ್ನು ವೃದ್ಧಿಸುವ ಸಾಂಸ್ಕೃತಿಕ ನೆಲಗಟ್ಟಿಗೆ ತಳಪಾಯ ನಿರ್ಮಿಸುವ ಸಂಭ್ರಮ. ಉಗಾದಿಯ ಬೇವು ಬೆಲ್ಲ ಜೀವನದ ನೋವು ನಲಿವು, ಕಷ್ಟಸುಖಗಳನ್ನು ಸಮಾನವಾಗಿ ಸದವೀಕರಿಸುವ ಸಾಂಕೇತಿಕ. ಜೊತೆಗೆ ಪ್ರಕೃತಿ ನೀಡುವ ಬೇವು ಮತ್ತು ಬೆಲ್ಲ ಈ ಪ್ರಾಕೃತಿಕ ಬದಲಾವಣೆ ವೇಳೆ ಆರೋಗ್ಯಕ್ಕೆ ಸಮತೋಲನ ನೀಡುವಂತದ್ದು ಎಂದರು.
ಇದೇ ವೇಳೆ ಮಲೆನಾಡಿನ ಜನಪದ ಚಿತ್ತಾರ ಹಸೆ ಕಲಾವಿದೆ ಲಕ್ಷ್ಮೀ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಗೀತಗಾಯನದಲ್ಲಿ ಸೋಮಶೇಖರ್, ವೀಣಾ ನಾಯ್ಕ್, ಶಾರದಾ, ಅರುಣ್ ಕುಮಾರ್ ಎನ್ ಎಸ್, ಶ್ರೀನಿಧಿ ಪಾಲ್ಗೊಂಡರು. ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕೋಬ ರಾವ್ ವಹಿಸಿದ್ದರು. ಪರಶುರಾಮಪ್ಪ, ದತ್ತಾತ್ರೇಯ ನಾಡಿಗೇರ್, ಪ್ರಭಾಕರ ಹೆಚ್ ಎಸ್, ರಮೇಶ್ ಬಿ, ಮಂಜಪ್ಪ ಪಿ, ಹಾಗೂ ಅನೇಕರಿದ್ದರು.
ವರದಿ: ಮಧು ರಾಮ್ ಸೊರಬ