ಚಿಕ್ಕಮಗಳೂರುನ್ಯೂಸ್

ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಪೂರಕ

ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಪೂರಕ


(CHIKAMAGALURU): ತರಕಾರಿಗಳು ಮಕ್ಕಳ ಆರೋಗ್ಯಕ್ಕೆ ಪೂರಕವಾಗಿದ್ದು, ಮಕ್ಕಳಿಗೆ ಉತ್ತಮ ಆರೋಗ್ಯವನ್ನು ನೀಡಲಿದೆ ಎಂದು ಮುಖ್ಯಶಿಕ್ಷಕಿ ರಜನಿ ದೇವಯ್ಯ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣ ರೇಣುಕನಗರದ ಸಂಸ್ಕೃತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ತರಕಾರಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.


ತರಕಾರಿಗಳು ಒಬ್ಬ ವ್ಯಕ್ತಿಯ ದೇಹಕ್ಕೆ ಸರಿಯಾದ ಪೋಷಣೆಯನ್ನು ಒದಗಿಸಲಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು, ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ತರಕಾರಿಗಳನ್ನು ಸೇವಿಸುವುದರಿಂದ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಪ್ರಮುಖವಾಗಿ ಹೃದಯ ರೋಗ, ಮಧುಮೇಹ, ಕ್ಯಾನ್ಸರ್ ಮುಂತಾದವನ್ನು ತಡೆಗಟ್ಟಲು ಸಹಕಾರಿ ಮಾಡಲಿದೆ.
ಒಂದೊಂದು ತರಕಾರಿಗಳಿಂದ ಒಂದೊಂದು ಉಪಯೋಗಗಳಿದ್ದು, ರಕ್ತದೊತ್ತಡ, ತೂಕ ಇಳಿಕೆ, ಮೂತ್ರಪಿಂಡದ ಕಲ್ಲು ಮುಂತಾದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಕಣ್ಣು, ಚರ್ಮ, ಬುದ್ಧಿಮತ್ತೆಗೆ ಹಲವಾರು ತರಕಾರಿಗಳು ಸಹಕಾರಿಯಾಗಿವೆ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು.


ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಇದರ ಮಹತ್ವವನ್ನು ತಿಳಿಸಿ ನಿತ್ಯ ಬಳಸಲು ಮಾರ್ಗದರ್ಶನ ಮಾಡಿದರೆ ಉತ್ತಮ ಆರೋಗ್ಯದೊಂದಿಗೆ ಜ್ಞಾನವೂ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ತರಕಾರಿ ದಿನಾಚರಣೆ ನಡೆಸಲಾಗಿದೆ ಎಂದರು.
ಪುಟಾಣಿಗಳು ವಿವಿಧ ತರಕಾರಿಗಳ ವೇಷ ಭೂಷಣಗಳನ್ನು ಧರಿಸಿ ಗಮನ ಸೆಳೆದಿದ್ದು, ಎಲ್ಲಾ ತರಕಾರಿಗಳನ್ನು ವೀಕ್ಷಿಸಿ ಅದರ ಮಹತ್ವ ತಿಳಿದುಕೊಂಡರು.
ಶಿಕ್ಷಕರಾದ ದೀಪಿಕಾ, ಅಶ್ವಿನಿ, ರೇಷ್ಮಾ, ಜಾಫ್ರಿನ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code